
ಹೈದರಾಬಾದ್ | ದಾವಣಗೆರೆ: (ಇಂಡೋ ಟೈಮ್ಸ್ ಮೀಡಿಯಾ) ಮುಂಬರುವ ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸೋಣ. ಭಿನ್ನಮತ, ಭಿನ್ನಾಭಿಪ್ರಾಯ ಬದಿಗೊತ್ತಿ ಯಾರಿಗೆ ಟಿಕೆಟ್ ಸಿಕ್ಕರೂ ಗೆಲುವಿಗೆ ದುಡಿಯೋಣ ಎಂದು ತೆಲಂಗಾಣ ಯುವ ಕಾಂಗ್ರೆಸ್ ಉಸ್ತುವಾರಿ ಸೈಯದ್ ಖಾಲಿದ್ ಅಹ್ಮದ್ ಅವರು ಕರೆ ನೀಡಿದರು.
ಹೈದರಾಬಾದ್ನ ಎಲ್ಬಿ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ತೆಲಂಗಾಣ ಸರ್ಕಾರ ಜನರ ಹಿತ ಕಾಪಾಡುತ್ತಿದೆ. ರಾಜ್ಯದ ಪ್ರತಿಯೊಬ್ಬರಿಗೂ ಸೌಲಭ್ಯ ಕೊಡಿಸುವಲ್ಲಿ ಯತ್ನಿಸುತ್ತಿದೆ. ಆರ್ಥಿಕ ಹೊರೆಯ ನಡುವೆಯೂ ಬಡವರು, ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲಾ ವರ್ಗದವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸರ್ಕಾರ ಸಾಧನೆಗಳು ನಮಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿದರು.
ಮುಂದಿನ ಚುನಾವಣೆಗಳಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಸರ್ಕಾರದ ಸಾಧನೆಗಳನ್ನು ಪ್ರತಿ ಮನೆ ಮನೆಗೆ ಹೋಗಿ ತಿಳಿಸುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಗೆ ಮತ ನೀಡುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷವು ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಆರ್ಥಿಕವಾಗಿ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕು ಹಸನಾಗಿಸಲು ಹಲವು ಕಾರ್ಯಕ್ರಮಗಳನ್ನು ನೀಡಿದೆ. ತೆಲಂಗಾಣ ಮತ್ತು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಪೂರ್ವದಲ್ಲಿ ಘೋಷಿಸಿ, ಈಗ ಜನರ ಆಶಯಕ್ಕೆ ತಕ್ಕಂತೆ ಅಧಿಕಾರ ನಡೆಸುತ್ತಿದ್ದು, ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ. ಯಾರೇ ಅಭ್ಯರ್ಥಿಯಾದರೂ ನಾನೇ ಅಭ್ಯರ್ಥಿ ಎಂದುಕೊಂಡು ಓಡಾಡಿ. ಜನರ ಮನಸ್ಸು ತಲುಪಿ. ಕಾರ್ಯಕ್ರಮಗಳ ಕುರಿತಂತೆ ಸಮಗ್ರ ಮಾಹಿತಿ ನೀಡಿ ಎಂದು ಯುವ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಶಾಂತಿ, ಸಹಬಾಳ್ವೆ, ತ್ಯಾಗ, ಬಲಿದಾನ, ಜಾತ್ಯಾತೀತತೆ, ದೇಶದ ಸಮಗ್ರತೆ, ಅಭಿವೃದ್ಧಿ ಯಾವಾಗಲೂ ಕಾಂಗ್ರೆಸ್ ಪಕ್ಷದ ಆದ್ಯತೆಯಾಗಿರುತ್ತದೆ. ಪಕ್ಷದ ಕಾರ್ಯಕರ್ತರು ಅಧಿಕಾರದಲ್ಲಿದ್ದೇವೆಂದು ಮೈಮರೆತರೆ ಕಷ್ಟ. ಚುನಾವಣೆ ಮುಗಿಯುವವರೆಗೆ ವಿರಮಿಸದೇ ಕೆಲಸ ಮಾಡಿ. ಸ್ವಲ್ಪ ನಾವು ಮೈಮರೆತರೂ ಗೆಲುವು ಕಷ್ಟವಾಗಲಿದೆ. ರೇವಂತ್ ರೆಡ್ಡಿ ಅವರ ಕೈ ಬಲಪಡಿಸೋಣ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಾವೂ ನೆರವಾಗೋಣ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಹೇಳಿದರು.
ಸಭೆಯ ಆರಂಭದಲ್ಲಿ ಪಹಲ್ಗಾಮ್ ದಾಳಿಯಲ್ಲಿ ಉಗ್ರರ ಗುಂಡಿಗೆ ಬಲಿಯಾದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು. ಮೃತರ ಕುಟುಂಬದವರಿಗೆ ನೋವು ಭರಿಸುವಂಥ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಸಭೆಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಉದಯ್ ಭಾನು, ಉಸ್ತುವಾರಿ ಕೃಷ್ಣ ಅಲ್ಲಾವರು, ಪೊನ್ನಂ ಪ್ರಭಾಕರ್, ತೆಲಂಗಾಣ ಕಾಂಗ್ರೆಸ್ ಸರ್ಕಾರದ ಸಚಿವರು, ರಾಜ್ಯಾಧ್ಯಕ್ಷ ಶಿವ ಚರಣ್ ಜಕ್ಕಿಡಿ ಮತ್ತಿತರರು ಹಾಜರಿದ್ದರು.