
ದಾವಣಗೆರೆ ಸೆ.19 (ಇಂಡೋ ಟೈಮ್ಸ್ ಮೀಡಿಯಾ):
ಸಾರ್ವಜನಿಕರ ದೂರು ಹಾಗೂ ಮನವಿಗಳನ್ನು ಕೇವಲ ಕಾಗದಪತ್ರಗಳಿಗೆ ಸೀಮಿತಗೊಳಿಸದೆ, ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ ಪರಿಹಾರ ಕಂಡುಕೊಳ್ಳುವಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶನಿವಾರ ದಾವಣಗೆರೆ ತಾಲೂಕಿನ ಜರಿಕಟ್ಟೆ ಗ್ರಾಮದಲ್ಲಿ ‘ಪ್ರಜಾ ಸೇವೆ’ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾ ಸೇವೆಯ ಪ್ರಮುಖ ಉದ್ದೇಶವೇ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವುದು. ‘ಪ್ರಜಾ ಸ್ಪಂದನ’ ಕಾರ್ಯಕ್ರಮದ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಕಾಗದದಲ್ಲಿ ನೀಡುವ ಮನವಿಗಳು ಕಳೆದುಹೋಗುವ ಸಾಧ್ಯತೆ ಇರುವುದರಿಂದ, ಪ್ರತಿಯೊಂದು ಅರ್ಜಿಯನ್ನು ತಕ್ಷಣವೇ ಆನ್ಲೈನ್ನಲ್ಲಿ ದಾಖಲಿಸಿ ಅರ್ಜಿದಾರರಿಗೆ ರಸೀದಿ ನೀಡಬೇಕು. ಇದರಿಂದ ಪ್ರತಿಯೊಂದು ದೂರಿನ ಪ್ರಗತಿಯನ್ನು ಲ್ಯಾಪ್ಟಾಪ್ ಮೂಲಕ ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಸ್ತೆ ಗುಂಡಿ ಮುಚ್ಚುವುದು, ಜಂಗಲ್ ಕ್ಲೀನಿಂಗ್ ಮುಂತಾದ ಸಣ್ಣಪುಟ್ಟ ಮೂಲಸೌಕರ್ಯ ಕಾಮಗಾರಿಗಳಿಗೆ ಅನುದಾನ ಇಲ್ಲ’ ಎಂಬ ನೆಪ ಹೇಳದೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಜೆಸಿಬಿ ಮತ್ತು ಅಗತ್ಯ ಕೆಲಸಗಾರರನ್ನು ಬಳಸಿಕೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸ್ಥಳೀಯ ಮಹಿಳೆಯರು ಹಾಗೂ ಉದ್ಯಮಿಗಳು ತಯಾರಿಸಿದ ಉಪ್ಪಿನಕಾಯಿ, ರೊಟ್ಟಿ, ಬಟ್ಟೆ ಹಾಗೂ ಗಾಣದ ಎಣ್ಣೆಯಂತಹ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪ್ರೋತ್ಸಾಹಿಸಿದರು.
ಪ್ರಜಾ ಸೇವೆ ಕಾರ್ಯಕ್ರಮವು ದಾವಣಗೆರೆ ದಕ್ಷಿಣ ವ್ಯಾಪ್ತಿಯ ಎಂಟು ಗ್ರಾಮ ಪಂಚಾಯಿತಿಗಳಲ್ಲಿ ಹಂತ-ಹಂತವಾಗಿ ಪ್ರತಿ ಶನಿವಾರ ಮುಂದುವರಿಯಲಿದ್ದು, ಸಾರ್ವಜನಿಕರು ತಮ್ಮ ಮನೆ ಬಾಗಿಲಿಗೆ ಬಂದಿರುವ ಈ ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಅವರು ಮಾತನಾಡಿ ಜನರ ಕಂದುಕೊರತೆ ಆಲಿಸಲು ‘ಪ್ರಜಾಸೇವೆ’ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರ ಪ್ರದೇಶಗಳಲ್ಲಿ ಈಗಾಗಲೇ ಹಲವು ಸಮಸ್ಯೆಗಳನ್ನು ಪರಿಶೀಲಿಸಲಾಗಿದ್ದು, ಶಾಸಕರ ನಿರ್ದೇಶನದಂತೆ ಈ ಪ್ರಜಾಸೇವೆ ಆಂದೋಲನವನ್ನು ಹೋಬಳಿ ಹಾಗೂ ಗ್ರಾಮ ಮಟ್ಟಕ್ಕೂ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದ ಈ ಯೋಜನೆಯಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಲಿಖಿತ ರೂಪದಲ್ಲಿ ಸ್ವೀಕರಿಸಿ, ಅವುಗಳಿಗೆ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ .
ಸಾರ್ವಜನಿಕರು ನಿಗದಿತ ಅರ್ಜಿ ನಮೂನೆಯಲ್ಲಿ ತಮ್ಮ ಸಂಪೂರ್ಣ ವಿವರ, ಮೊಬೈಲ್ ಸಂಖ್ಯೆ, ಇ-ಮೇಲ್ ಮತ್ತು ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಿ ಸಲ್ಲಿಸಬೇಕು ಹಾಗೂ ಸ್ವೀಕೃತಿ ರಸೀದಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರತೀ ಶನಿವಾರ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಪ್ರತಿ ಬುಧವಾರ ತಾಲೂಕು, ವಿಭಾಗೀಯ ಹಾಗೂ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಹಂತ-ಹಂತವಾಗಿ ಪರಿಶೀಲಿಸಿ ವಿಲೇವಾರಿ ಮಾಡಲಾಗುತ್ತದೆ.
ಸ್ವೀಕರಿಸಿದ ಪ್ರತಿಯೊಂದು ಅರ್ಜಿಯನ್ನು ಆನ್ಲೈನ್ನಲ್ಲಿ ದಾಖಲಿಸಲಾಗುತ್ತಿದ್ದು, ಕೈಗೊಂಡ ಕ್ರಮದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರು ನೂಕುನುಗ್ಗಲು ಮಾಡದೆ ತಾಳ್ಮೆಯಿಂದ ಸಹಕರಿಸಬೇಕು. ತಾಲೂಕು ಕಚೇರಿಯಲ್ಲೂ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಅಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಬಂದಿರುವ ಅರ್ಜಿಗಳಲ್ಲಿ ಬಹುತೇಕ ಅರ್ಜಿಗಳು ನಿವೇಶನ, ಹಕ್ಕುಪತ್ರ, ಪೌತಿ ಖಾತೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಾಗಿದ್ದು, ಅವುಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸಾಹಿತ್ಯ ಎಂ.ಅಲದಕಟ್ಟಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಡಿಡಿಎಲ್ಆರ್ ಭಾಗ್ಯ, ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಇಓ ರಾಂಭೋವಿ, ತಹಶೀಲ್ದಾರ್ ರಾಜೇಶ್, ಜಿಲ್ಲಾ ಮಟ್ಟದ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.