
ದಾವಣಗೆರೆ, ಜೂನ್ 18, (Indo Times Media) : ಜಿಲ್ಲೆಯಲ್ಲಿ ನಕಲಿ ವೈದ್ಯರ ದಂದೆಗೆ ಕಡಿವಾಣ ಹಾಕಲು ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿಯು ತೀವ್ರ ಸ್ವರೂಪದ ಕಾನೂನು ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಆಗ ಮಾತ್ರ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಕಡಿಮೆಯಾಗಲು ಸಾಧ್ಯವಾಗುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳೆನ್ನದೆ ಎಲ್ಲೆಡೆ ತಲೆ ಎತ್ತಿರುವ ಇಂತಹ ನಕಲಿ ಕ್ಲಿನಿಕ್ಗಳ ವಿರುದ್ಧ ಮುಂಬರುವ ದಿನಗಳಲ್ಲಿ ಇನ್ನಷ್ಟು ಕಠಿಣ ಕಾನೂನು ಕ್ರಮ ಕೈಗೊಂಡು ನಕಲಿ ವೈದ್ಯ ಮುಕ್ತ ಜಿಲ್ಲೆಯನ್ನಾಗಿಸಲು ಕ್ರಮವಹಿಸುವಂತೆ ಸಭೆಯಲ್ಲಿ ಹಾಜರಿದ್ದ ವೈದ್ಯಾಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದರು.
ಅವರು ಇಂದು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಕಲಿವೈದ್ಯರ ಪತ್ತೆ ಮಾಡುವುದು ಮತ್ತು ಕಾನೂನು ಕ್ರಮಕೈಗೊಳ್ಳುವ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯ ಮಟ್ಟದ ಗುಪ್ತಚರ ಇಲಾಖೆಯ ವರದಿ ಹಾಗೂ ಸ್ಥಳೀಯವಾಗಿ ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ಜಿಲ್ಲೆಯಲ್ಲಿ ಸದ್ಯ ಒಟ್ಟು 40 ನಕಲಿ ವೈದ್ಯರ ಪ್ರಕರಣಗಳು ದಾಖಲಾಗಿವೆ. ಆದರೆ ಜಿಲ್ಲೆಯಲ್ಲಿ ಇನ್ನು ಹೆಚ್ಚು ನಕಲಿ ವೈದ್ಯರಿದ್ದಾರೆ . ನಕಲಿ ವೈದ್ಯರನ್ನು ಗುರುತಿಸಲು ತಾಲೂಕು ವೈದ್ಯಾಧಿಕಾರಿಗಳನ್ನೊಳಗೊಂಡ ತಂಡದೊಂದಿಗೆ ಅಧಿಕಾರಿಗಳಿಗೆ ತಕ್ಷಣವೇ ದಾಳಿ ನಡೆಸಿ ಪರಿಶೀಲಿಸುವಂತೆ ಜವಾಬ್ದಾರಿ ವಹಿಸಲಾಗಿತ್ತು. ಅದರಂತೆ ತಂಡಗಳನ್ನು ರಚಿಸಿ ಈಗಾಗಲೇ ಹಲವೆಡೆ ಯಶಸ್ವಿ ದಾಳಿಗಳನ್ನು ನಡೆಸಿ ವರದಿ ನೀಡಿದ್ದಾರೆ ಎಂದು ತಿಳಿಸಿದರು.
2007 ರಿಂದಲೇ ಸರ್ಕಾರವು ಅನಧಿಕೃತ ಮತ್ತು ನಕಲಿ ವೈದ್ಯರ ಪತ್ತೆಗೆ ಸಂಬಂಧಿಸಿದಂತೆ ಹಲವಾರು ಸುತ್ತೋಲೆಗಳನ್ನು ಹೊರಡಿಸಿದೆ. ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ಖಾಸಗಿ ವೈದ್ಯಕೀಯ ವೃತ್ತಿ ನಡೆಸಬೇಕಾದರೆ ಕೆಪಿಎಂಇ (KPME) ಕಾಯ್ದೆ 2007ರ ಸೆಕ್ಷನ್ 2(K) ಅಡಿಯಲ್ಲಿ ಕನಿಷ್ಠ ಎಂಬಿಬಿಎಸ್ (MBBS) ಪದವಿ ಅಥವಾ ಮಾನ್ಯತೆ ಪಡೆದ ಆಯುರ್ವೇದ, ಸಿದ್ದ, ಯುನಾನಿ, ಹೋಮಿಯೋಪತಿ ಪದವಿಗಳನ್ನು ಹೊಂದಿರಬೇಕು ಹಾಗೂ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು ಆದರೆ ನಕಲಿ ವೈದ್ಯರು ಆರು ತಿಂಗಳು, ಒಂದು ವರ್ಷ, ಎರಡು ವರ್ಷದ ತರಬೇತಿಯನ್ನು ಪಡೆದು ನಕಲಿ ಚಿಕಿತ್ಸಾಲಯಗಳನ್ನು ತೆರೆದು ಚುಚ್ಚುಮದ್ದು ನೀಡುವುದು, ಸ್ಟೀರಾಯ್ಡ್ ಔಷದಿಗಳನ್ನು ನೀಡುವುದು ಮಾಡುತ್ತಿದ್ದಾರೆ ಇವೆಲ್ಲರೂ ಮಾನವೀಯತೆಯ ವಾದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಾ ವೈದ್ಯ ವೃತ್ತಿಗೆ ಅವಮಾನ ಮಾಡುತ್ತಿದ್ದಾರೆ ಎಂದರು.
ಅನಧಿಕೃತವಾಗಿ ವೈದ್ಯಕೀಯ ವೃತ್ತಿ ಕೈಗೊಳ್ಳುವವರ ವಿರುದ್ಧ ಕೆಪಿಎಂಇ ಕಾಯ್ದೆಯ ಸೆಕ್ಷನ್ 34 ಮತ್ತು 36ರ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ. ನಿಯಮ ಉಲ್ಲಂಘಸಿದ ನಕಲಿ ವೈದ್ಯರಿಗೆ 25,000 ರೂ.ಗಳಿಂದ 1.00 ಲಕ್ಷ ರೂ.ಗಳವರೆಗೆ ದಂಡದೊಂದಿಗೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಡಾ. ಮಂಜುನಾಥ ಪಾಟೀಲ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯೋಗೇಂದ್ರ ಕುಮಾರ್ ತಾಲ್ಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.