
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪ್ರಸರಣ ಮಾರ್ಗ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಕೇವಲ ವಿದ್ಯುತ್ ಜಾಲವನ್ನು ಬಲಪಡಿಸುವುದಷ್ಟೇ ಅಲ್ಲದೆ, ಕೃಷಿ ಆಧುನೀಕರಣ, ಶಿಕ್ಷಣ, ಸ್ಥಳೀಯ ಉದ್ಯಮ ಹಾಗೂ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಹೊಸ ಅವಕಾಶಗಳನ್ನು ತೆರೆದಿಡುತ್ತಿವೆ. ಈ ಪರಿವರ್ತನೆಯಲ್ಲಿ ಭೂಮಿ ಹಾಗೂ ಬೆಳೆಗಳಿಗೆ ದೊರೆಯುವ ಪರಿಹಾರವು ಸೂಕ್ತ ಯೋಜನೆ ರೂಪಿಸಿದಲ್ಲಿ ರೈತ ಕುಟುಂಬಗಳ ಭವಿಷ್ಯದ ಆರ್ಥಿಕ ಭದ್ರತೆಗೆ ಪ್ರಮುಖ ಆಧಾರವಾಗಬಲ್ಲದು.
ನೀರಾವರಿಗೆ ಹೂಡಿಕೆ; ಕೃಷಿಗೆ ಹೊಸ ಶಕ್ತಿ-
ಪರಿಹಾರವನ್ನು ಒಂದು ಬಾರಿಯ ಹಣವೆಂದು ಪರಿಗಣಿಸುವ ಬದಲು, ಭವಿಷ್ಯದ ಆದಾಯದ ಮೂಲವನ್ನಾಗಿ ರೂಪಿಸುವ ಅಗತ್ಯವಿದೆ. ಮಳೆ ಆಧಾರಿತ ಕೃಷಿ ನಡೆಸುವ ರೈತರು ಪರಿಹಾರದ ಒಂದು ಭಾಗವನ್ನು ಬೋರ್ವೆಲ್, ಹನಿ ಮತ್ತು ತುಂತುರು ನೀರಾವರಿ, ಉತ್ತಮ ತಳಿಯ ಬೀಜ, ಮಣ್ಣಿನ ಸುಧಾರಣೆ ಹಾಗೂ ಆಧುನಿಕ ಕೃಷಿ ಉಪಕರಣಗಳಿಗೆ ಬಳಸಿದರೆ, ಹವಾಮಾನ ಅವಲಂಬಿತ ಕೃಷಿಯನ್ನು ಹೆಚ್ಚು ಉತ್ಪಾದಕ ಕೃಷಿಯನ್ನಾಗಿ ಪರಿವರ್ತಿಸಬಹುದು.
ಮಕ್ಕಳ ಶಿಕ್ಷಣಕ್ಕೆ ಆದ್ಯತೆ-
ಮಕ್ಕಳ ಶಿಕ್ಷಣಕ್ಕೂ ಪರಿಹಾರ ಮೊತ್ತದಲ್ಲಿ ಆದ್ಯತೆ ನೀಡುವುದು ದೂರದೃಷ್ಟಿಯ ನಿರ್ಧಾರ. ಶಾಲಾ ಶುಲ್ಕ, ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ತರಬೇತಿಗೆ ಹಣ ಮೀಸಲಿಟ್ಟರೆ ಭವಿಷ್ಯದಲ್ಲಿ ಸಾಲದ ಅವಲಂಬನೆ ಕಡಿಮೆಯಾಗುತ್ತದೆ. ಮಕ್ಕಳಿಗೆ ಕೌಶಲ್ಯಾಧಾರಿತ ಶಿಕ್ಷಣ ನೀಡುವುದರಿಂದ ಕೃಷಿಯ ಹೊರತಾಗಿಯೂ ಉತ್ತಮ ಉದ್ಯೋಗ ಹಾಗೂ ವೃತ್ತಿ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಜಗಳೂರು ತಾಲ್ಲೂಕಿನ ಪ್ರಸರಣ ಯೋಜನೆಗೆ ಭೂಮಿ ನೀಡಿರುವ ರೈತ ರಂಗನಾಥ ರೆಡ್ಡಿ ಅವರು “ಪರಿಹಾರ ಮೊತ್ತವನ್ನು ಕೃಷಿ ಅಭಿವೃದ್ಧಿ ಹಾಗೂ ಮಕ್ಕಳ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬಳಸಿರುವುದಾಗಿ ತಿಳಿಸಿದ್ದಾರೆ. ‘ಅನಗತ್ಯ ಖರ್ಚು ಮಾಡುವ ಬದಲು ನೀರಾವರಿ, ಕೃಷಿ ಸುಧಾರಣೆ, ಶಿಕ್ಷಣ ಹಾಗೂ ಭವಿಷ್ಯದ ಆದಾಯದ ಅವಕಾಶಗಳಲ್ಲಿ ಹೂಡಿಕೆ ಮಾಡಬೇಕು’ ಎಂಬುದು ಅವರ ಅನುಭವದ ಮಾತು.
ಕೃಷಿಯ ಜತೆಗೆ ಪರ್ಯಾಯ ಆದಾಯ;
ಪರಿಹಾರ ಮೊತ್ತವನ್ನು ಒಂದೇ ಆದಾಯ ಮೂಲದ ಮೇಲೆ ಅವಲಂಬಿಸದೆ, ಪರ್ಯಾಯ ಆದಾಯ ಸೃಷ್ಟಿಸುವ ಚಟುವಟಿಕೆಗಳಿಗೂ ಬಳಸಬಹುದು. ಸ್ಥಳೀಯ ಬೇಡಿಕೆ ಹಾಗೂ ಕುಟುಂಬದ ಸಾಮರ್ಥ್ಯಕ್ಕೆ ಅನುಗುಣವಾಗಿ ಹೈನುಗಾರಿಕೆ, ಪಶುಸಂಗೋಪನೆ, ಕೋಳಿ ಸಾಕಣೆ, ತೋಟಗಾರಿಕೆ, ಕೃಷಿ ಯಂತ್ರೋಪಕರಣ ಬಾಡಿಗೆ ಹಾಗೂ ಆಹಾರ ಸಂಸ್ಕರಣೆಯಂತಹ ಸಣ್ಣ ಉದ್ಯಮಗಳನ್ನು ಆರಂಭಿಸುವ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದು.
ಸಣ್ಣ ಉದ್ಯಮ ಅಥವಾ ಕೃಷಿ ಆಧಾರಿತ ಸಂಸ್ಕರಣಾ ಘಟಕ ಆರಂಭಿಸುವಾಗ ಕೇವಲ ಯಂತ್ರೋಪಕರಣ ಖರೀದಿಗೆ ಹಣ ಖರ್ಚು ಮಾಡದೆ, ಕಚ್ಚಾ ವಸ್ತು, ಕಾರ್ಮಿಕ ವೆಚ್ಚ, ವಿದ್ಯುತ್, ಸಾಗಣೆ ಹಾಗೂ ಮಾರುಕಟ್ಟೆ ವೆಚ್ಚಗಳನ್ನೂ ಪರಿಗಣಿಸಬೇಕು. ಹಂತ ಹಂತವಾಗಿ ಹೂಡಿಕೆ ಮಾಡುವ ಮೂಲಕ ಪರಿಹಾರ ಮೊತ್ತವನ್ನು ದೀರ್ಘಕಾಲಿಕ ಆದಾಯದ ಮೂಲವನ್ನಾಗಿ ರೂಪಿಸಬಹುದು.
ಬೋರ್ವೆಲ್ನಿಂದ ತೋಟಗಾರಿಕೆ;
ಹಿರೇಮಲ್ಲನಹೊಳೆ ಪಾತಪ್ಪ ಅವರು ಪ್ರಸರಣ ಗೋಪುರ ಹಾಗೂ ಕಂಡಕ್ಟರ್ ಅಳವಡಿಕೆಗಾಗಿ ಎರಡು ವರ್ಷಗಳ ಹಿಂದೆ ಭೂಮಿ ನೀಡಿದ್ದು, ಭೂಮಿ ಮತ್ತು ಬೆಳೆಗಳಿಗೆ ಸಮರ್ಪಕ ಪರಿಹಾರ ಪಡೆದಿದ್ದು, ಪರಿಹಾರದಿಂದ ಬೋರ್ವೆಲ್ ಕೊರೆಸಿ, ವಿದ್ಯುತ್ ಸಂಪರ್ಕ ಪಡೆದು, ತರಕಾರಿ ಮತ್ತು ಹೂವುಗಳಂತಹ ಹೆಚ್ಚಿನ ಮೌಲ್ಯದ ತೋಟಗಾರಿಕೆ ಬೆಳೆಗಳಿಗೆ ಅವರು ಮುಂದಾಗಿದ್ದು, ಇದರಿಂದ ಆದಾಯ ಹೆಚ್ಚಾಗಿದೆ” ಎಂದು ಅಭಿಪ್ರಾಯಪಟ್ಟರು.
ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ;
ಸುಸ್ಥಿರ ಭವಿಷ್ಯ ಪ್ರತಿ ರೈತ ಕುಟುಂಬಕ್ಕೂ ಒಂದೇ ರೀತಿಯ ಹೂಡಿಕೆ ಯೋಜನೆ ಸೂಕ್ತವಾಗುವುದಿಲ್ಲ. ಸಾಲದ ಪ್ರಮಾಣ, ಭೂಹಿಡುವಳಿ, ನೀರಿನ ಲಭ್ಯತೆ, ಕುಟುಂಬದ ಆದಾಯ ಹಾಗೂ ಸ್ಥಳೀಯ ಮಾರುಕಟ್ಟೆ ಪರಿಸ್ಥಿತಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು. ಹೆಚ್ಚಿನ ಬಡ್ಡಿಯ ಸಾಲ ತೀರಿಸುವುದು, ತುರ್ತು ನಿಧಿ ಹಾಗೂ ಉಳಿತಾಯಕ್ಕೆ ಆದ್ಯತೆ ನೀಡಿ, ಕೃಷಿ ಅಭಿವೃದ್ಧಿ, ಶಿಕ್ಷಣ, ಉದ್ಯಮ ಮತ್ತು ಉಳಿತಾಯ—ಈ ನಾಲ್ಕು ಕ್ಷೇತ್ರಗಳಲ್ಲಿ ಸಮತೋಲನದ ಹೂಡಿಕೆ ಮಾಡಿದರೆ ಪರಿಹಾರ ಮೊತ್ತವು ಮುಂದಿನ ಪೀಳಿಗೆಗಳ ಸ್ವಾವಲಂಬನೆಗೆ ಭದ್ರ ಬುನಾದಿಯಾಗಬಲ್ಲದು.