
ಕರ್ನಾಟಕವು ಹಲವು ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ಸಂಗಮವಾಗಿರುವ ಬಹುಭಾಷಾ ರಾಜ್ಯ. ಇಲ್ಲಿ ಪ್ರತಿಯೊಂದು ಭಾಷೆಗೂ ತನ್ನದೇ ಆದ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಅಸ್ಮಿತೆಯಿದೆ. ಆದ್ದರಿಂದ ಯಾವುದೇ ಭಾಷೆಯ ಹಕ್ಕುಗಳನ್ನು ಗೌರವಿಸುವುದು ಮತ್ತೊಂದು ಭಾಷೆಯ ಹಕ್ಕುಗಳನ್ನು ನಿರಾಕರಿಸುವ ಕಾರಣವಾಗಬಾರದು.
ಇತ್ತೀಚೆಗೆ ಕರ್ನಾಟಕ ಸರ್ಕಾರವು ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎರಡನೇ ಹೆಚ್ಚುವರಿ ಆಡಳಿತ ಭಾಷೆ ಸ್ಥಾನಮಾನ ನೀಡಲು ಸಚಿವ ಸಂಪುಟದಲ್ಲಿ ನಿರ್ಧರಿಸಿದೆ. ತುಳು ಭಾಷೆಯ ದೀರ್ಘಕಾಲದ ಬೇಡಿಕೆಗೆ ದೊರೆತಿರುವ ಈ ಮಾನ್ಯತೆಯನ್ನು ನಾವು ಸ್ವಾಗತಿಸುತ್ತೇವೆ.
ಆದರೆ ತುಳುವಿಗೆ ಆಡಳಿತಾತ್ಮಕ ಮಾನ್ಯತೆ ನೀಡಲು ಸಾಧ್ಯವಾಗಿರುವ ಕರ್ನಾಟಕ ಸರ್ಕಾರಕ್ಕೆ, ಉರ್ದು ಭಾಷೆ ಮತ್ತು ಉರ್ದು ಮಾಧ್ಯಮ ಶಿಕ್ಷಣದ ಹಕ್ಕುಗಳ ವಿಚಾರದಲ್ಲಿ ಇದೇ ರೀತಿಯ ಗಂಭೀರತೆ ಏಕೆ ಕಾಣಿಸುತ್ತಿಲ್ಲ?
ಭಾರತದ ಹಲವು ರಾಜ್ಯಗಳಲ್ಲಿ ಉರ್ದುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ಅಥವಾ ಅಧಿಕೃತ ಬಳಕೆಯಲ್ಲಿ ಮಾನ್ಯತೆ ನೀಡಲಾಗಿದೆ. ಕೇಂದ್ರ ಸರ್ಕಾರದ ಭಾಷಾ ಸಂಬಂಧಿತ ದಾಖಲೆಗಳಲ್ಲಿಯೂ ಬಿಜೆಪಿ ಆಡಳಿತದಲ್ಲಿ ಇರುವ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಉರ್ದುವಿಗೆ ಅಧಿಕೃತ ಮಾನ್ಯತೆ ಇರುವುದನ್ನು ದಾಖಲಿಸಲಾಗಿದೆ.
ಕರ್ನಾಟಕದಲ್ಲಿಯೂ ಉರ್ದು ಮಾತನಾಡುವ ದೊಡ್ಡ ಜನಸಂಖ್ಯೆಯಿದೆ. 2011ರ ಜನಗಣತಿಯ ಮಾತೃಭಾಷಾ ದತ್ತಾಂಶದಲ್ಲಿ ಕರ್ನಾಟಕದ ಉರ್ದು ಭಾಷಿಕರು 66% ಮತ್ತು ತುಳು 16% ಭಾಷಿಕರ ಸಂಖ್ಯೆಯನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ.
ಆದರೆ ಉರ್ದು ಮಾಧ್ಯಮ ಶಾಲೆಗಳ ಪರಿಸ್ಥಿತಿ ನೋಡಿದಾಗ ಇನ್ನೂ ಹಲವು ಪ್ರಶ್ನೆಗಳು ಉಳಿದಿವೆ.
ವರ್ಷಗಳಿಂದ ಖಾಲಿ ಇರುವ ಉರ್ದು ಶಿಕ್ಷಕರ ಹುದ್ದೆಗಳನ್ನು ಸಮರ್ಪಕವಾಗಿ ಭರ್ತಿ ಮಾಡದೆ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಉರ್ದು ಮಾಧ್ಯಮ ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಶಾಲೆಗಳ ಹುದ್ದೆಗಳ ಕುರಿತು ಪ್ರಶ್ನೆಗಳು ಎದ್ದಿವೆ.
ನಂತರ ಉರ್ದು ಮಾಧ್ಯಮಕ್ಕೆ 800 ಶಿಕ್ಷಕರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ ಎಂಬ ವರದಿಗಳು ಬಂದಿವೆ. ಆದರೆ ವರ್ಷಗಳಿಂದ ಬಾಕಿ ಇರುವ ಖಾಲಿ ಹುದ್ದೆಗಳ ಪ್ರಮಾಣವನ್ನು ಗಮನಿಸಿದರೆ, ಸೀಮಿತ ಸಂಖ್ಯೆಯ ಹುದ್ದೆಗಳ ಘೋಷಣೆಯಿಂದ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವುದಿಲ್ಲ.
ಇದು ಸಾವಿರಾರು ಮಕ್ಕಳ ಶಿಕ್ಷಣದ ಹಕ್ಕಿನ ಪ್ರಶ್ನೆ. ಭಾಷೆಯ ಅಭಿವೃದ್ಧಿ ಎಂದರೆ ಕೇವಲ ಆ ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವುದಲ್ಲ. ಆ ಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಸಮರ್ಪಕ ಶಿಕ್ಷಕರು, ಶಾಲೆಗಳು, ಪಠ್ಯಸಾಮಗ್ರಿಗಳು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದೂ ಭಾಷಾ ನ್ಯಾಯದ ಭಾಗವಾಗಿದೆ.
ಇದರ ಜೊತೆಗೆ ಮತ್ತೊಂದು ವಿಚಾರವೂ ಸಾರ್ವಜನಿಕ ಚರ್ಚೆಗೆ ಬರಬೇಕಾಗಿದೆ. ಕರ್ನಾಟಕದ 9 ವಿಶ್ವವಿದ್ಯಾಲಯಗಳಿಗೆ ಹೆಸರುಗಳನ್ನು ಇಡುವ ಕುರಿತು ಶಿಕ್ಷಣ ಇಲಾಖೆ ಪ್ರಸ್ತಾವನೆಗಳನ್ನು ಕಳುಹಿಸಿದೆ ಎಂಬ ಸಂದರ್ಭದಲ್ಲಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಯಾವುದೇ ಪ್ರಮುಖ ನಾಯಕ, ಶಿಕ್ಷಣತಜ್ಞ ಅಥವಾ ಸಮಾಜ ಸುಧಾರಕರ ಹೆಸರನ್ನು ಶಿಫಾರಸು ಮಾಡಲಾಗಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ.
ಕರ್ನಾಟಕದ ಸಾಮಾಜಿಕ, ಶೈಕ್ಷಣಿಕ, ಸ್ವಾತಂತ್ರ್ಯ ಹೋರಾಟ, ಸಾಹಿತ್ಯ ಮತ್ತು ಸಾರ್ವಜನಿಕ ಜೀವನಕ್ಕೆ ಮುಸ್ಲಿಂ ಸಮುದಾಯದ ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ. ಹಾಗಿರುವಾಗ ವಿಶ್ವವಿದ್ಯಾಲಯಗಳಂತಹ ಪ್ರಮುಖ ಸಾರ್ವಜನಿಕ ಸಂಸ್ಥೆಗಳಿಗೆ ಹೆಸರುಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಸಮುದಾಯಗಳ ಕೊಡುಗೆಗಳನ್ನೂ ಸಮಾನವಾಗಿ ಪರಿಗಣಿಸುವುದು ಅಗತ್ಯ.
ಇಲ್ಲಿ ಪ್ರಶ್ನೆ ಯಾರ ಹೆಸರನ್ನು ಇಡಬೇಕು ಎಂಬುದಕ್ಕಿಂತ, ಯಾರ ಕೊಡುಗೆಯನ್ನು ಗುರುತಿಸಲಾಗುತ್ತಿದೆ ಮತ್ತು ಯಾರ ಕೊಡುಗೆಯನ್ನು ಮರೆತುಹೋಗಲಾಗುತ್ತಿದೆ ಎಂಬುದಾಗಿದೆ.
ಇನ್ನೊಂದು ರಾಜಕೀಯವಾಗಿ ಸೂಕ್ಷ್ಮವಾದ ಪ್ರಶ್ನೆಯೂ ಇದೆ. ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಬೆಂಬಲವನ್ನು ಪಡೆದು ಅಧಿಕಾರಕ್ಕೆ ಬಂದಿರುವ ಸಂದರ್ಭದಲ್ಲಿ, ಅಲ್ಪಸಂಖ್ಯಾತರ ಭಾಷೆ, ಶಿಕ್ಷಣ ಮತ್ತು ಸಾಂಸ್ಕೃತಿಕ ಹಕ್ಕುಗಳ ಬಗ್ಗೆ ಸರ್ಕಾರದಿಂದ ಇನ್ನಷ್ಟು ಸ್ಪಷ್ಟವಾದ ಕ್ರಮಗಳನ್ನು ನಿರೀಕ್ಷಿಸುವುದು ಸಹಜ. ಆದ್ದರಿಂದ “ಉರ್ದು ಭಾಷೆ ಮತ್ತು ಉರ್ದು ಮಾಧ್ಯಮ ಶಿಕ್ಷಣದ ವಿಚಾರದಲ್ಲಿ ಕರ್ನಾಟಕದಲ್ಲಿ ಇನ್ನೂ ಏಕೆ ಈ ತಾರತಮ್ಯ?” ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕು.
ತುಳುವಿನ ಅಭಿವೃದ್ಧಿಗೆ ನಾವು ವಿರೋಧಿಗಳಲ್ಲ ತುಳುವಿಗೆ ಸಿಗಬೇಕಾದ ಗೌರವ ಸಿಗಲಿ.
ಉರ್ದುವಿಗೂ ಸಿಗಬೇಕಾದ ನ್ಯಾಯ ಸಿಗಲಿ ತುಳು ಭಾಷಿಕರ ಹಕ್ಕುಗಳನ್ನು ಗೌರವಿಸುವುದರ ಜೊತೆಗೆ ಉರ್ದು ಭಾಷಿಕರ ಶಿಕ್ಷಣ ಮತ್ತು ಭಾಷಾ ಹಕ್ಕುಗಳನ್ನೂ ರಕ್ಷಿಸಬೇಕು. ಕನ್ನಡ, ತುಳು, ಉರ್ದು ಸೇರಿದಂತೆ ಕರ್ನಾಟಕದ ಎಲ್ಲಾ ಭಾಷೆಗಳಿಗೂ ಸಮಾನ ಗೌರವ ಮತ್ತು ನ್ಯಾಯ ದೊರೆಯಬೇಕು.
ಒಂದು ಭಾಷೆಯ ಹಕ್ಕಿಗಾಗಿ ಮತ್ತೊಂದು ಭಾಷೆಯ ಹಕ್ಕನ್ನು ಪ್ರಶ್ನಿಸುವ ಅಗತ್ಯವಿಲ್ಲ.
ತುಳುವಿಗೂ ನ್ಯಾಯ ಉರ್ದುವಿಗೂ ನ್ಯಾಯ ಎಲ್ಲಾ ಭಾಷೆಗಳಿಗೂ ಸಮಾನ ಗೌರವ.
ಇದೇ ಕರ್ನಾಟಕದ ಬಹುಭಾಷಾ, ಬಹುಸಾಂಸ್ಕೃತಿಕ ಮತ್ತು ಸಹಬಾಳ್ವೆಯ ಪರಂಪರೆಗೆ ನಿಜವಾದ ಗೌರವ.
✍️ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರದಾನ ಕಾರ್ಯದರ್ಶಿ ಎಸ್ಡಿಪಿಐ ಕರ್ನಾಟಕ