

ಜಗಳೂರು (ದಾವಣಗೆರೆಗೆ ತಾ): ರಾಗಿ ಕಟಾವು ಯಂತ್ರ ಪಲ್ಟಿಯಾದ ಕಾರಣ ಯಂತ್ರದಡಿ ಸಿಲುಕಿ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಮನಕುಲುಕುವ ಘಟನೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬೈರನಾಯ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.ಬಂಗಾರಕ್ಕನಗುಡ್ಡ ಗ್ರಾಮದ ಮಹೇಶ್ (32) ಹಾಗೂ ರಾಧಮ್ಮ (28) ಸಾವನ್ನಪ್ಪಿದ ಕಾರ್ಮಿಕರು. ಬೈರನಾಯ್ಕನಹಳ್ಳಿ ಗ್ರಾಮದ ಜಮೀನೊಂದರಲ್ಲಿ ರಾಗಿ ಕಟಾವು ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಹಿಂದಿರುಗುವಾಗ ಟ್ರ್ಯಾಕ್ಟರ್ ನಿಂದ ರಾಗಿ ಕಟಾವು ಯಂತ್ರ ಕಳಚಿ ಪಲ್ಟಿಯಾಗಿದ್ದು, ಯಂತ್ರದ ಕೆಳಗೆ ಸಿಲುಕಿಕೊಂಡು ಇಬ್ಬರೂ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.