
ದಾವಣಗೆರೆ, ಜೂನ್ : 15: ಇಂಡೋ ಟೈಮ್ಸ್ ಮೀಡಿಯಾ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಜಾ ಉಲ್ ಮುಸ್ತಫಾ ನಗರ (ಮುಸ್ತಫಾ ನಗರ) ಪ್ರದೇಶದ ಮತದಾರರ ಪಟ್ಟಿಯಲ್ಲಿ ಗಂಭೀರ ದೋಷ ಕಂಡುಬಂದಿದ್ದು, ಅರ್ಹ ಮತದಾರರ ಹೆಸರುಗಳು 2002ರ ಮತದಾರರ ಪಟ್ಟಿಯಲ್ಲಿ ಕಾಣೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಸ್ಥಳೀಯ ನಿವಾಸಿಗಳು ಹಾಗೂ ಎಸ್ಡಿಪಿಐ ನಿಯೋಗ ಈಗಾಗಲೇ ದಿನಾಂಕ 09-03-2026 ರಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಹಾಗೂ ಮತದಾರ ನೋಂದಣಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಬಳಿಕ ದಿನಾಂಕ 14-03-2026 ರಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳಿಗೆ ಸಹ ಮನವಿ ಸಲ್ಲಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದರೂ, ಇದುವರೆಗೆ ಯಾವುದೇ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ ಎಂಬುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಮನವಿಯ ಪ್ರಕಾರ, ರಜಾ ಉಲ್ ಮುಸ್ತಫಾ ನಗರದ ನಿವಾಸಿಗಳು ಕಳೆದ ಸುಮಾರು 30 ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸವಾಗಿದ್ದು, 2002ರ ಚುನಾವಣೆಯಲ್ಲಿ ಬಿ. ಕಲ್ಪನಹಳ್ಳಿ ಭಾಗದಲ್ಲಿ ಮತದಾನ ಮಾಡಿದ್ದಾರೆ. ಆದರೆ 2002ರ ಮಾಯಕೊಂಡ ವಿಧಾನಸಭಾ ಕ್ಷೇತ್ರ-42ರ ಭಾಗ ಸಂಖ್ಯೆ 25ರ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ, ಮುಖಪುಟದಲ್ಲಿ “ಭಾಗದ ಪ್ರದೇಶ – ಬಿ. ಕಲ್ಪನಹಳ್ಳಿ” ಹಾಗೂ “ರಜಾಉಲ್ಲಾ ಮುಸ್ತಫಾ ನಗರ” ಎಂದು ನಮೂದಿಸಿದ್ದರೂ, ಒಳಗಿನ ಪುಟಗಳಲ್ಲಿ ಕೇವಲ ಬಿ. ಕಲ್ಪನಹಳ್ಳಿ ಗ್ರಾಮದ ಮತದಾರರ ಹೆಸರುಗಳು ಮಾತ್ರ ಕಂಡುಬರುತ್ತಿವೆ. ಮುಸ್ತಫಾ ನಗರದ ಮತದಾರರ ಹೆಸರುಗಳು ಸಂಪೂರ್ಣವಾಗಿ ಕಾಣೆಯಾಗಿರುವುದು ಗಂಭೀರ ಆಡಳಿತಾತ್ಮಕ ದೋಷವೆಂದು ಪರಿಗಣಿಸಲಾಗಿದೆ.
ಇದೇ ವೇಳೆ, ಮುಸ್ತಫಾ ನಗರದ ಮತದಾರರ ಹೆಸರುಗಳನ್ನು 2002ರ ಇತರೆ ಭಾಗಗಳಲ್ಲಿಯೂ ಪರಿಶೀಲಿಸಿದಾಗಲೂ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಇದು ತಾಂತ್ರಿಕ ದೋಷವಾಗಿರಬಹುದಾದರೂ, ಮತದಾರರ ಹಕ್ಕಿಗೆ ಧಕ್ಕೆ ಉಂಟುಮಾಡುವ ಗಂಭೀರ ಸಮಸ್ಯೆಯಾಗಿದೆ.
ಇತ್ತೀಚೆಗೆ ಎಸ್ಡಿಪಿಐ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಅನೇಕ ಅರ್ಹ ಮತದಾರರ ಹೆಸರುಗಳು ಪಟ್ಟಿಯಲ್ಲಿ ಕಾಣೆಯಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆ, ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಮತದಾನದ ಹಕ್ಕು ಹರಣವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದ್ದು, ಕೆಳಗಿನ ಬೇಡಿಕೆಗಳನ್ನು ಮುಂದಿರಿಸಲಾಗಿದೆ:
- 2002ರ ಭಾಗ ಸಂಖ್ಯೆ 25ರ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು
- ಮುಸ್ತಫಾ ನಗರದ ಮತದಾರರ ಹೆಸರುಗಳು 2002ರಲ್ಲಿ ಯಾವ ಭಾಗದಲ್ಲಿ ಸೇರಿಸಲಾಗಿದ್ದವು ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು
- ಪಟ್ಟಿಯಲ್ಲಿ ಕಾಣೆಯಾಗಿರುವ ಎಲ್ಲಾ ಅರ್ಹ ಮತದಾರರ ಹೆಸರುಗಳನ್ನು ಗುರುತಿಸಿ ತಿದ್ದುಪಡಿ ಕ್ರಮ ಕೈಗೊಳ್ಳಬೇಕು
- ಈ ದೋಷಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು
- ಮುಂದಿನ ದಿನಗಳಲ್ಲಿ ಇಂತಹ ದೋಷಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಜಾರಿಗೊಳಿಸಬೇಕು
ಈ ಕುರಿತು ತಕ್ಷಣ ಸ್ಪಷ್ಟಿಕರಣ ನೀಡಿ, ಮತದಾರರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ನಿಯೋಗದಲ್ಲಿ ಅಪ್ಸರ್ ಕೊಡ್ಲಿಪೇಟೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪರಾಜಿತ ಅಭ್ಯರ್ಥಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷರಾದ ಎ.ಆರ್. ತಾಹೀರ್ , ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಕುಬೇಬ್, ಜಿಲ್ಲಾ ಸಮಿತಿ ಸದಸ್ಯರಾದ ಏಜಾಜ್ ಅಹ್ಮದ್ , ಯಾಹಿಯಾ,ಝಬಿ ಆಜಾದ್ ನಗರ, ಸ್ಥಳೀಯ ಮುಖಂಡರಾದ ಮಹಮ್ಮದ್ ಅಲಿ,ಹಶಮ್ ಪೀರ್ ದರ್ಗ ಮುಜವರ್ ಹಜ್ರತ್ ಅಲಿ, ಸಲೀಂ, ಝೀಕ್ರಿಯ, ಅಬ್ದುಲ್ ರಝಾಕ್ ಸೇರಿದಂತೆ ಮುಸ್ತಫಾ ನಗರದ ಮಹಿಳೆಯರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಇದ್ದ ಕಾರಣ ಜಿಲ್ಲಾಧಿಕಾರಿಗಳ ಪರವಾಗಿ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದ್ದಾರೆ .